ಮಂಗಳವಾರ, ಡಿಸೆಂಬರ್ 15, 2009
ಸುಮಾರು ಇಪ್ಪತ್ತೆಂಟು- ಇಪ್ಪತ್ತೊಂಬತ್ತು ವರ್ಷಗಳ ಹಿಂದೆ, ಬಹುಶಃ ನಾನಾಗ ನಾಲ್ಕನೆಯೋ ಐದನೆಯೋ ಕ್ಲಾಸಿನಲ್ಲಿ ಇದ್ದಿರಬಹುದು, ಒಂದು ದಿನ ನನ್ನ ಅಪ್ಪಒಮ್ಮೆ ಮಂಗಳೂರಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಿದ್ದರು. ನಮ್ಮ ಮನೆ ಅಜಕ್ಕಳದಿಂದ ಸುಮಾರು ಮುರು ಮೈಲು ದೂರ ಇರುವ ಬುಳೇರಿಕಟ್ಟೆಗೆ ನಡೆದು ಅಲ್ಲಿಂದ ಬಸ್ಸಲ್ಲಿ ಪುತ್ತೂರಿಗೆ ಹೋಗಿ ಅಲ್ಲಿಂದ ನೋನ್-ಸ್ಟೋಪ್ ಬಸ್ಸಲ್ಲಿ ಮಂಗಳೂರಿಗೆ ಹೋಗುವುದು ಆಗೆಲ್ಲ.
ಮಂಗಳೂರಿನ ಹಂಪನಕಟ್ಟೆ ಬಸ್ ಸ್ಟಾಂಡಲ್ಲಿ ಇಳಿದು(ಈಗ ಪಾರ್ಕಿಂಗ್ ಇರುವ ಜಾಗದಲ್ಲಿ ಆಗ ಬಸ್ ಸ್ಟಾಂಡ್ ಇತ್ತು) ಮಾರ್ಕೆಟಿನ ಕಡೆಗೆ ಹೋಗುವಾಗ ಅಪ್ಪ ನನ್ನ ಕಾಲನ್ನು ನೋಡಿದರು. ಕೇಳಿದರು,
"ಥಕ್ ! ಬೋದಾಳ, ನೀನು ಚಪ್ಪಲಿ ಹಾಕ್ಲಿಲ್ಲವೋ?"
ನಾನೆಂದೆ, "ಬೇಡಾಂತ ಕಂಡಿತು, ಇಡೀ ದಿನ ಹಾಕಿದ್ರೆ ಚಪ್ಪಲಿ ಕಚ್ಚಿದ್ರೆ ಅಂತ ". ಆ ಕಾಲದಲ್ಲಿ ಮನೆಯ ಮೆಟ್ಟಿಲಿಳಿವಾಗ ಚಪ್ಪಲಿ ಕಡ್ಡಾಯವಾಗಿರಲಿಲ್ಲ.
ಅಪ್ಪ ಕೇಳಿದ್ರು ,"ಮನೆಯಲ್ಲಿ ಜೋಡು ಉಂಟಲ್ಲ? "
" ಉಂಟು. "
ಮನೆಯಲ್ಲಿ ಒಂದಿರುತ್ತಾ ಮಂಗಳೂರಲ್ಲಿ ಹೊಸತೊಂದು ಖರೀದಿಸುವುದು ವೇಸ್ಟು. ವಿಷಯ ಅದಲ್ಲ.
ಅಷ್ಟು ದೂರ ನಡೆವಾಗಲಾಗಲೀ, ಈವನ್ ಪುತ್ತೂರು ಪೇಟೆಯಲ್ಲಾಗಲೀ ನನ್ನ ಕಾಲಿನ ಬಗ್ಗೆ ಕಾಳಜಿ ಮಾಡದ ಅಪ್ಪ ಈಗ ಯಾಕೆ ಈ ಪ್ರಶ್ನೆ ಕೇಳ್ತಾರೆ ಅಂತ ಆಗ ನನಗೆ ಅರ್ಥ ಆಗ್ಲಿಲ್ಲ.
ಆದ್ರೆ ಆ ಇಡೀ ಮಂಗಳೂರು ಯಾತ್ರೆಯಲ್ಲಿ ನನಗೆ ನೆನಪಿರೋದು ಅದೊಂದೇ ಸಂಗತಿ. ಮಂಗಳೂರಲ್ಲಿ ಯಾಕೆ ಚಪ್ಪಲಿ ಬಗ್ಗೆ , ಕಾಲಿನ ಬಗ್ಗೆ ಕಾಳಜಿ ಮಾಡಿದ್ರು ಅಂತ ಸುಮಾರು ವರ್ಷಗಳ ನಂತರ ನನಗೆ ಅರ್ಥ ಆಯಿತು.ನಗರಗಳ ಗಲೀಜು ಅಂಥದ್ದು. ಈಗ ಹಳ್ಳಿಗಳು ನಗರಗಳಾಗುತ್ತಿರುವಾಗ ಗಲೀಜು ಅಲ್ಲಿಗೂ ತಲುಪುತ್ತಿದೆ ಅನ್ನುವುದು ಬೇರೆ ಪ್ರಶ್ನೆ.
ಇಂದು ನಗರಗಳು ಕಸ ತಯಾರಿಯ ಕೇಂದ್ರಗಳಾಗುತ್ತಿವೆ. ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯ.ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಅಂಗಡಿ ಮಾಲಿಕರಂತೆ ನಮ್ಮಂಥ ಗಿರಾಕಿಗಳೂ ಕಾರಣ ನಿಜ. ಆದರೆ ,ನಮ್ಮ ಸಣ್ಣ ಪೇಟೆಗಳಲ್ಲಿ ಅನೇಕ ಬಾರಿ ನಾನು ನೋಡಿದ್ದೇನೆ- ಅಂಗಡಿಯವರು ಅದರಲ್ಲೂ ಮುಖ್ಯವಾಗಿ ಫೇನ್ಸಿ ಅಂಗಡಿಯವರು ಸಂಜೆಯಾಗುವಾಗ ಅಂಗಡಿಯನ್ನು ಚೆನ್ನಾಗಿ ಗುಡಿಸಿ ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ತಂದು ರಸ್ತೆ ಬದಿ ಚರಂಡಿಗೆ ಹಾಸಿದ ಕಾಂಕ್ರೀಟು ಹಲಗೆಗಳ ಎಡೆಯಲ್ಲಿರುವ ಸೆರೆಯಲ್ಲಿ ತೂರಿಸುವುದನ್ನು.
ಪೇಟೆಯಲ್ಲಿ ನಡೆವಾಗ ಇಂಥ ಗ್ಯಾಪುಗಳ ಮುಲಕ ಇಣುಕಿ ಒಳಗೆ ನೀರು ಹರಿಯುತ್ತಿದೆಯೇ ಎಂದು ನೋಡುವುದು ( ಇಣುಕುರತಿ ! ) ನನಗೊಂದು ಹವ್ಯಾಸ.ಹೀಗಾಗಿಯೇ ಕೆಲವೊಮ್ಮೆ ಹಲವರಿಗೆ ನಾನು ಡಿಕ್ಕಿ ಹೊಡೆದು ಸಾರಿ ಹೇಳಿ ಬೈಸಿಕೊಂಡದ್ದು ಉಂಟು.ಚರಂಡಿಯೊಳಗೆ ಕಾಣುವುದು ಪ್ಲಾಸ್ಟಿಕ್ ತೊಟ್ಟೆ, ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ಮಾತ್ರ .ಇನ್ನು ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹೋಗದೆ ಮತ್ತೆಲ್ಲಿ ನಮ್ಮ ತಲೆ ಮೇಲೆ ಹೋಗೋದಾ?
ಸಣ್ಣ-ದೊಡ್ಡ ಪೇಟೆಗಳಲ್ಲಿರುವ ತೆರೆದ ಸಣ್ಣ ಪುಟ್ಟ ತೋಡುಗಳಂತೂ ಕೇಳುವುದೇ ಬೇಡ. ಪ್ಲಾಸ್ಟಿಕ್ ತೊಟ್ಟೆಗಳಿಂದ ತುಂಬಿಹೋಗಿವೆ.ಓಡುವ ನೀರನ್ನು ನಡೆವಂತೆ ಮಾಡಿ ನಡೆವ ನೀರನ್ನು ನಿಲ್ಲುವಂತೆ ಮಾಡಿ ಅಂತ ನೀರಿಂಗಿಸುವವರು ಹೇಳುತ್ತಾರಲ್ಲ ಹಾಗೆ ತೋಡಿಗೆ ತೊಟ್ಟೆ ಹಾಕುವ ಮುಲಕ ನಾವು ಮಳೆನೀರಿಂಗಿಸುತ್ತಿದ್ದೇವೆ !!
ನಗರ ಅನ್ನುವ ಪದದಿಂದ ನಾಗರಿಕ ಅನ್ನುವ ಪದ ಬಂದಿರಬೇಕು. ನಾಗರಿಕ ಪ್ರಜ್ಞೆಯ ದೊಡ್ಡ ಕೊರತೆ ಇರುವುದು ಕೂಡ ನಗರದಲ್ಲೇ.
ಇಂಥ ಅಂಗಡಿಯವರ ನಡುವೆ ಗಿರಾಕಿಗಳಿಗೆ ಫ್ಲಾಸ್ಟಿಕ್ ತೊಟ್ಟೆಯಲ್ಲಿ ಹಾಕಿ ಪುಸ್ತಕಗಳನ್ನು ಪ್ಯಾಕ್ ಮಾಡಿ ಕೊಡೋದಿಲ್ಲಾಂತ ಖಡಾಖಡಿ ಹೇಳುವ ಮುಲಕ ವ್ಯಾಪಾರವನ್ನೂ ಕಳೆದುಕೊಳ್ಳಲು ಸಿದ್ಧವಿರುವ ಅತ್ರೀಯಂಥವರೂ ಇದ್ದಾರೆ ಅನ್ನೋದು ಸಂತೋಷದ ಸಂಗತಿ . ನಿಜವಾಗಿ ಅದು ಹೈಲೀ ಕಸ್ಟಮರ್ ಅನ್ ಫ್ರೆಂಡ್ಲೀ ಅಲ್ವೆ? ಪ್ಲಾಸ್ಟಿಕ್ ಬ್ಯಾಗ್ ಇಲ್ವ ನಿಮ್ಮಲ್ಲಿ ಅಂತ ಆಶ್ಚರ್ಯ/ಸಿಟ್ಟುಇತ್ಯಾದಿ ಭಾವಗಳಿಂದ ಕೇಳುವ ಗ್ರಾಹಕರಿಗೆ ಉತ್ತರ ಕೊಟ್ಟು ಕೊಟ್ಟು ಅಶೋಕವರ್ಧನರಿಗೆ ಬೊಡಿದು ಹೋಗಿ ಇವತ್ತಲ್ಲ ನಾಳೆ ತೊಟ್ಟೆ ಇಟ್ಟೇ (ಪುಸ್ತಕವನ್ನು) ಮಾರಿಯಾರೆಂದು ಸುಮಾರು ಸಮಯದಿಂದ ಆಲೋಚನೆ ಮಾಡುತ್ತಿದ್ದ ನನ್ನ ಗ್ರಹಿಕೆ ಸುಳ್ಳೆಂದು ನನಗೆ ಮನವರಿಕೆ ಆಗಿಯೇ ಸುಮಾರು ಸಮಯ ಆಯಿತು.
ಘನ ತ್ಯಾಜ್ಯ ವಿಲೇವಾರಿ ಹೀಗೇಕೆ ಮಾಡಬಾರದು ?
ಈಗ ನಗರಗಳ ದೊಡ್ಡ ಸಮಸ್ಯೆ ಘನ ತ್ಯಾಜ್ಯ ವಿಲೇವಾರಿ.
ಈ ಚತುಷ್ಪಥ ಇತ್ಯಾದಿ ರಸ್ತೆಗಳ ನಿರ್ಮಾಣದ ಸಂದರ್ಭವನ್ನು ತ್ಯಾಜ್ಯ ವಿಲೇವಾರಿಗೆ ಯಾಕೆ ಬಳಸಿಕೊಳ್ಳಬಾರದು ? ಮಂಗಳೂರಿನಿಂದ ಬಿ. ಸಿ .ರೋಡಿಗೆ ಹೋಗುವ ರಸ್ತೆ ಅಗಲೀಕರಣಕ್ಕೆ ಹಲವು ಕಡೆಗಳಲ್ಲಿ ಇಪ್ಪತ್ತು ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಮಣ್ಣು ಹಾಕಲಾಗಿದೆ. ಹೀಗೆ ಸುಮಾರು ಇಪ್ಪತ್ತು ಅಡಿಗಳಿಗಿಂತ ಎತ್ತರ ಮಣ್ಣು ನಿಲ್ಲುವಲ್ಲಿ ಅಡಿಯಲ್ಲಿ ಸಣ್ಣ ತೆಳು ಪದರ ಪ್ಲಾಸ್ಟಿಕ್ ,ಕುಪ್ಪಿ ಚೂರು ಇತ್ಯಾದಿ ಘನತ್ಯಾಜ್ಯಗಳನ್ನು ಹಾಕಬಹುದಲ್ಲ? ಉದ್ದಕ್ಕೆ ಹಾಕಬಾರದು, ಅಡಿಯ ಮಣ್ಣಿಗೆ ಮೇಲಿನ ಮಣ್ಣು ಕಚ್ಚಿಕೊಳ್ಳುವಷ್ಟು ಗ್ಯಾಪ್ ಬಿಟ್ಟರಾಯಿತು. ಇಂಥಾ ವಿಷಯಗಳಲ್ಲಿ ಪುರಸಭೆ-ನಗರಪಾಲಿಕೆಯವರು ರಸ್ತೆ ಕಂತ್ರಾಟುಧಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಇದು ಸುಲಭ ಸಾಧ್ಯ. ಹೇಗಿದ್ದರೂ ಹೆದ್ದಾರಿ ಅಡಿಯನ್ನು ಮುಂದಕ್ಕೆ ಅಗೆಯುವ ಅಗತ್ಯ ಕಡಿಮೆ. ಏನಿದ್ದರೂ ನಾವು ಮಾಡಿದ ಹೇಸಿಗೆಯನ್ನು ಭೂ ತಾಯಿಯೇ ಎಲ್ಲಾದರೂ ಹೊಟ್ಟೆಗೆ ಹಾಕಿಕೊಳ್ಳಬೇಕು ತಾನೆ ? ಹೆದ್ದಾರಿಗಳು ಎಲ್ಲವನ್ನು ನುಂಗಿ ನೊಣೆಯುತ್ತವೆ. ಸ್ವಲ್ಪ ಪ್ಲಾಸ್ಟಿಕ್ ಕೂಡ ನುಂಗಲಿ.ಅಷ್ಟಾದ್ರೆ ಅಷ್ಟು.
ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದ,ವಿವಿಧ ಆಡಳಿತಾತ್ಮಕ ವಿಭಾಗಗಳಿಗೆ ಪರಸ್ಪರ ಪರಿಚಯವೇ ಇಲ್ಲದ ನಮ್ಮ ದೇಶದಲ್ಲಿ ಇದೆಲ್ಲ ಸಾಧ್ಯವೇ ಅನ್ನೋದು ಪ್ರಶ್ನೆ.
ಇನ್ನೋದು ಬೇಸರದ ಸಂಗತಿ ಅಂದರೆ ಕಸದ ತೊಟ್ಟಿಗಳನ್ನು ಖಾಲಿ ಮಾಡಿ ಲಾರಿಗೆ ಮನುಷ್ಯರೇ ಕೈಗೆ ಗವಸು ಕೂಡ ಇಲ್ಲದೆ ಲೋಡು ಮಾಡುವ ಪರಿಸ್ಥಿತಿ ಹಲವು ಕಡೆಗಳಲ್ಲಿ ಈಗಲೂ ಉಳಿದಿರುವುದು.ಅದನ್ನೂ ನಿರ್ದಿಷ್ಟ ಜಾತಿಯವರೇ ಮಾಡಬೇಕಾಗಿರುವುದು ಖೇದಕರ. ಇಷ್ಟೆಲ್ಲ ಯಾಂತ್ರೀಕರಣ ಆಗಿರುವಾಗ ಜೆ ಸಿ ಬಿ ಅಥವಾ ಅದನ್ನೆ ಸ್ವಲ್ಪ ಮಾರ್ಪಾಡು ಮಾಡಿದ ಯಂತ್ರದ ಮುಲಕ ಈ ತೊಟ್ಟಿ ಖಾಲಿ ಕೆಲಸ ಮಾಡುವುದೇನೂ ಕಷ್ಟವಲ್ಲ . ಆ ಕಾರ್ಮಿಕರಿಗೆ ಕೆಲಸ ಇಲ್ಲ ಅಂತೇನೂ ಆಗಲಾರದು.ಅವರಿಗೆ ಪೇಟೆ ಸ್ವಚ್ಚತಾ ಮೇಲುಸ್ತುವಾರಿ ಜವಾಬ್ದಾರಿ ಕೊಟ್ಟರಾಯಿತು. (ಗಣಕ ಯಂತ್ರ ಬಂದಾಗ ಕೆಲಸ ಕಳ್ಕೊಳ್ತಾರೆ ಅಂತ ಬೊಬ್ಬೆ ಹೊಡೆದವರೆಷ್ಟು ಮಂದಿಯೋ ? ಹೊಸ ಕೆಲಸ ಸ್ರುಷ್ಟಿ ಆಗಲಿಲ್ವೆ ? )
ಕೊನೆ ಬೆಡಿ:
ಕತ್ತಲ ಹಾದಿಯಲ್ಲಿ ನಡೆವವರು ಎಡವುವುದನ್ನು ಯಾರೂ ನೋಡುವುದಿಲ್ಲ.
ಮಂಗಳವಾರ, ಡಿಸೆಂಬರ್ 1, 2009
ಕ್ಷಮಿಸಿ, ನನ್ನ ಅಭಿಪ್ರಾಯ ಈಗಿನ ಬಹುತೇಕ ಜನರ ಅಭಿಪ್ರಾಯಕ್ಕಿಂತ ಬೇರೆಯಾಗಿದೆ.ಅದರಲ್ಲೂ ಮಾನವ ಹಕ್ಕಿನ ಬಗ್ಗೆ ಕಾಳಜಿ ಉಳ್ಳವರ ಮಟ್ಟಿಗಂತೂ ಅಮಾನವೀಯವಾಗಿ ಕಾಣುವಂತಿರಬಹುದು.ಇರಲಿ. ಅಪರಾಧಕ್ಕೆ ಶಿಕ್ಷೆ ಯಾಕೆ?ಈ ಪ್ರಶ್ನೆ ವಿಚಿತ್ರವಾಗಿ ಕಾಣಬಹುದು. ತುಂಬಾ ಜನ ಅಂದುಕೊಳ್ಳುವುದೇನೆಂದರೆ ಅಪರಾಧ ಮಾಡಿದ್ದಕ್ಕಾಗಿ ಶಿಕ್ಷೆ ಅಂತ. ವಾಸ್ತವವಾಗಿ ಶಿಕ್ಷೆ ಕೊಡಬೇಕಾದದ್ದು ಮತ್ತು ಕೊಡುವುದು ಆತ ಇನ್ನು ಮುಂದೆ ಅಪರಾಧ ಮಾಡಬಾರದು ಎಂದಷ್ಟೆ ಅಲ್ಲ .ಅದಕ್ಕಿಂತ ಮುಖ್ಯವಾಗಿ,ಅಂಥ ಅಪರಾಧಗಳನ್ನು ಬೇರೆಯವರು ಮಾಡಬಾರದು ಎಂಬ ಕಾರಣಕ್ಕಾಗಿ.ಹಾಗಾಗಿ ಅಪರಾಧದ ಪ್ರಮಾಣಕ್ಕೆ ಅನುಗುಣವಾಗಿ ಕಠಿಣ ಶಿಕ್ಷೆಯೇ ಆಗಬೇಕಾಗುತ್ತದೆ.
ಭಿನ್ನಾಭಿಪ್ರಾಯ ಎಂದೆನಲ್ಲ, ಅದು ಜೈಲುಗಳ ಬಗ್ಗೆ. ಜೈಲುಗಳು ಕೆಟ್ಟ ಸ್ಥಿತಿಯಲ್ಲಿವೆಯೆಂದು ಎಲ್ಲರೂ ಬೊಬ್ಬೆ ಹೊಡೆಯುತ್ತಾರೆ.ಜೈಲುಗಳು ಇರಬೇಕಾದದ್ದೇ ಹಾಗೆ. ಅಲ್ಲದಿದ್ದರೆ ಅದು ಶಿಕ್ಷೆಯಾಗುವುದು ಹೇಗೆ? ವಿಚಾರಣಾಧೀನ ಕೈದಿಗಳಿಗೆ ಮಾತ್ರ ಒಳ್ಳೆ ವ್ಯವಸ್ಥೆಯಿರಬೇಕು ನಿಜ.ಹಾಗಾಗಿ ಅವರಿಗೆ ಬೇರೆಯೇ ಜೈಲುಗಳು ಬೇಕು.ಈ ಮಟ್ಟಿಗೆ ಜೈಲು ವ್ಯವಸ್ಥೆ ಸುಧಾರಣೆಯಾಗಬೇಕೆಂಬುದು ನಿಜ. ನ್ಯಾಯಾಲಯದಿಂದ ತಪ್ಪಿತಸ್ಥರೆಂದು ತೀರ್ಮಾನವಾದ ಕೈದಿಗಳಿಗೆ ಈಗಿರುವುದಕ್ಕಿಂತ ಕೆಟ್ಟ ಜೈಲುಗಳೇ ಬೇಕು.ಅವರಿಗೆ ನಾಟಕ ಅದು ಇದು ಮನರಂಜನೆ ಇತ್ಯಾದಿ ಇರಬಾರದು.ಅವರ ಮನಪರಿವರ್ತನೆ ಮಾಡಬೇಕು ಎಂಬುದೆಲ್ಲ ಬರೀ ಬೊಗಳೆ.ಹಾಗೆ ಮನಪರಿವರ್ತನೆ ಆಗಬೇಕಾದರೆ ಶಿಕ್ಷಿಸದೆ ಬಿಡುವುದೇ ಒಳ್ಳೆಯದು.
ತಪ್ಪು ಮಾಡಿದವರನ್ನು ಕ್ಷಮಿಸಬೇಕು ಅಂತೆಲ್ಲ ಹಲವು ಪ್ರಾಜ್ಞರು,ಸಂತರು ಹೇಳಿದ್ದಾರೆ ನಿಜ; ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡುವುದು ತಪ್ಪು ಅಂತಾದರೆ ಈ ಎರಡನೆ ತಪ್ಪನ್ನೂ ದೇವರು ಮನ್ನಿಸಿಯಾನು.
ಎಲ್ಲದಕ್ಕಿಂತ ಮೊದಲು ಆಗಬೇಕಾದದ್ದು ಏನೆಂದರೆ, ಈಗಿರುವುದಕ್ಕಿಂತ ಹತ್ತು ಪಟ್ಟು ನ್ಯಾಯಾಲಯಗಳನ್ನು ಸ್ಥಾಪಿಸುವುದು.ಎಲ್ಲ ಹಂತಗಳಲ್ಲು ನ್ಯಾಯಾಲಯಗಳು ಹೆಚ್ಚಾಗಬೆಕು. ನ್ಯಾಯತೀರ್ಮಾನವು ಅತ್ಯಂತ ಶೀಘ್ರವಾಗಿ ಆಗಬೇಕಾದುದು ಮುಖ್ಯ.ವಿಚಾರಣಾಧೀನವಾಗಿ ಕೈದಿಗಳು ಕೊಳೆಯಬಾರದು. ಪ್ರತಿ ಹಂತದ ನ್ಯಾಯಾಧೀಶರ ತೀರ್ಪುಗಳು ವಿಮರ್ಶೆಗೆ ಒಳಗಾಗಬೇಕು.ಒಬ್ಬ ನ್ಯಾಯಾಧೀಶನ ಇಂತಿಷ್ಟು ಖಟ್ಳೆಗಳು ಮೇಲಿನ ಹಂತದಲ್ಲಿ ಬಿದ್ದು ಹೋದರೆ ಆತನಿಗೆ ಹಿಂಬಡ್ತಿ, ವಜಾ ಇತ್ಯಾದಿ ಶಿಕ್ಷೆಗಳಾಗಬೇಕು.ಇದು ತಾಲೂಕು ಮಟ್ಟದಿಂದ ಮೇಲಿನವರೆಗೂ ಅನ್ವಯಿಸಬೇಕು.ಸುಪ್ರೀಂ ಕೊರ್ಟ್ ನ್ಯಾಯಾಧೀಶರೇ ಹಾಳಾದರೆ ದೇವರೇ ಗತಿ !?
ಪೋಲಿಸರ ಬಗ್ಗೆ ಕೂಡ ಮಾನವ ಹಕ್ಕಿನವರಿಗೆ ಇರುವುದಕ್ಕಿಂತ ಹೆಚ್ಚು ಸಹಾನುಭೂತಿ ನನಗಿದೆ.ಯಾಕೆಂದರೆ ಪೋಲಿಸರು ಕೂಡಾ ಮಾನವರೇ ಎಂದು ನನ್ನ ಅಲ್ಪ ತಿಳುವಳಿಕೆಗೆ ತೋರುತ್ತದೆ.ಲಾಕಪ್ ಡೆತ್,ಎನಕೌಂಟರ್ ಇತ್ಯಾದಿ ಆರೋಪಗಳು ಇವೆ ಬಿಡಿ.ಆದರೂ ಕೊಲೆಗಾರನೊಬ್ಬನನ್ನು ಹಿಡಿದು, ಆರಾಮಕುರ್ಚಿಯಲ್ಲಿ ಕೂರಿಸಿ ಚಾ ತರಿಸಿ "ನೀವು ಕೊಲೆಗೆ ಬಳಸಿದ ಆಯುಧ ಎಲ್ಲಿದೆ ದಯಮಾಡಿ ಹೇಳಿ" ಎಂದರೆ ಅವರು ತಂದುಕೊಟ್ಟಾರು ಅಂತ ಕೆಲವರು ಅಂದಾಜು ಮಾಡುತ್ತಾರೆ.ಏನು ಮಾಡೋಣ, ಪೊಲೀಸರ ದೌರ್ಜನ್ಯವನ್ನು ನೆನಪು ಮಾಡಿಕೊಳ್ಳುವಾಗ ಅವರ ಅಸಹಾಯಕತೆಯನ್ನೂ ನಾವು ನೆನಪಿಸಿಕೊಳ್ಳಬೇಕು.
ಕಸಬನ ಉದಾಹರಣೆ ತೆಗೆದುಕೊಳ್ಳಿ. ೩೦೦ ಚಿಲ್ರೆ ಸಾಕ್ಷಿಗಳ ಪಾಟೀಸವಾಲು ಆಗಬೇಕೆಂದು ಅವನ ವಕೀಲ ಹೇಳಿದ್ದನಂತೆ. ಕೋರ್ಟ್ ೭೦ ಸಾಕು ಅಂತ ಹೇಳಿದೆಯಂತೆ.೭೦ ಜನರನ್ನಾದರೂ ಪಾಟೀಸವಾಲು ಮಾಡಬೇಕಾದರೆ ಎಷ್ಟು ದಿನ ಬೇಕು ಲೆಕ್ಕ ಹಾಕಿ. ಒಂದು ಕೊಲೆಯನ್ನು ೧೦೦೦ ಜನ ನೋಡಿದ್ದೇವೆಂದು ಹೇಳಿದರೆ ಅಷ್ಟೂ ಜನರನ್ನು ಪಾಟೀಸವಾಲು ಮಾಡಬೇಕೆಂದಾಯಿತು.ಪುಣ್ಯಕ್ಕೆ ಕಸಬ ಗುಂಡು ಹಾರಿಸುವುದನ್ನು ಟಿ.ವಿ.ಯಲ್ಲಿ ನೋಡಿದ ಅಷ್ಟೂ ಮಂದಿಯನ್ನು ಪಾಟೀಸವಾಲು ಮಾಡಲಿಕ್ಕಿದೆ ಅಂತ ಆ ವಕೀಲ ಹೇಳಲಿಲ್ಲ!!ಅವನಿಗೆ ಉರ್ದುವಿನಲ್ಲಿ ಚಾರ್ಜುಶೀಟು ಬೇರೆ ಬೇಕಂತೆ.ಅವನು ಮೈನರೋ ಮೈನೆರೆದಿದ್ದಾನೋ ಅಂತ ನೋಡಲಿಕ್ಕೇ ನಮ್ಮ ಸರಕಾರಕ್ಕೆ ಎಷ್ಟು ಖರ್ಚಾಯಿತು ಎಂದು ದೇವರಿಗೇ ಗೊತ್ತು.ಕಸಬ್ ಒಂದು ಉದಾಹರಣೆ ಮಾತ್ರ. ಗಾಂಧೀಜಿ ಹಿಂದ್ ಸ್ವರಾಜ್ ನಲ್ಲಿ ವಕೀಲರನ್ನು ಬೈದದ್ದು ಸುಮ್ಮನೆ ಅಲ್ಲ.ಸತ್ಯ ಎಲ್ಲರಿಗೂ ಪರಮಮೌಲ್ಯವಾಗಬೇಕಾದದ್ದು ನ್ಯಾಯ ತಾನೆ?ಅದರಲ್ಲೂ ನ್ಯಾಯಾಲಯದಲ್ಲಿ ?ಆದರೆ ನ್ಯಾಯವಾದಿಗಳು "ಈತ ಅಪರಾಧಿಯಾಗಿದ್ದರೆ ನನ್ನ ಈ ಕಕ್ಷಿಗಾರನಿಗೆ ಶಿಕ್ಷೆಯಾಗುವಂತೆ ನಾನೇ ವಾದಿಸುತ್ತೇನೆ.ಸತ್ಯವನ್ನೇ ಹೇಳುತ್ತೇನೆ" ಎಂದೆಲ್ಲ ಯಾವ ಪ್ರತಿಜ್ಞೆಯನ್ನೂ ಮಾಡುವುದಿಲ್ಲವಲ್ಲ.
ಕೊನೆ ಬೆಡಿ:
ಸುಳ್ಳು ಹೇಳುವುದು ಅನ್ಯಾಯ.ಆದರೆ ಬೇರೆಯವರ ಪರವಾಗಿ ಸುಳ್ಳು ಹೇಳುವವನು ನ್ಯಾಯವಾದಿ.
ಸೋಮವಾರ, ನವೆಂಬರ್ 30, 2009
ಶೂನ್ಯದೊಳಗೆ
ಬ್ರಹ್ಮಾಂಡ
ಕಂಡು
ಕಾಣದ್ದನ್ನು
ಕಂಡೆ
ಎನ್ನದೆ
ಕಂಡದ್ದನ್ನು
ಬಯಲಾಗಿಸಿದ
ಎಲ್ಲ
ತತ್ವಜ್ಞಾನಿಗಳಿಗೆ
ನಮಸ್ಕಾರ.
ಕನ್ನಡ
ಕೀಲಿಮಣೆ
ಪ್ರಮಾಣಬದ್ಧ
ಮಾಡಿದ
ಕಿನ್ನಿಕಂಬಳ
ರಾಯರಿಗೆ
ನಮೋನ್ನಮಃ.
"ಜಾಲಲೇಖ"ವೆಂಬ ಹೆಸರು
ಇಂಗ್ಲಿಶಿನಲ್ಲಿ ಬ್ಲಾಗ್ ಎಂದು ಕರೆಯುವುದನ್ನು ಕನ್ನಡದಲ್ಲಿ ಜಾಲಲೇಖವೆಂದು ಕರೆಯಬಹುದೆಂದು ನನಗೆ ತೋರುತ್ತದೆ.
ಜಾಲತಾಣ ಎಂದು ಕರೆದ ಹಾಗೆ ಇದು.ಲೇಖಜಾಲ ಎಂದೂ ಕರೆಯಬಹುದಾಗಿತ್ತು; ಆದರೆ,ಆಗ ಜಾಲಕ್ಕೇ ಹೆಚ್ಚು ಮಹತ್ವ ಕೊಟ್ಟ ಹಾಗೆ ಆಗುತ್ತದೆ ಅಂತ ನನ್ನ ಅಂದಾಜು.ಬೇರಾರಾದರೂ ಈಹೆಸರು ಅಥವಾ ಬೇರೆ ಯಾವುದಾದರೂ ಹೆಸರನ್ನು ಬ್ಲಾಗ್ ಗೆ ಕನ್ನಡದಲ್ಲಿ ಈಗಾಗಲೇ ಇಟ್ಟಿದ್ದಾರೆಯೇ ಅಂತ ನನಗೆ ಗೊತ್ತಿಲ್ಲ. ಯಾರಾದರೂ ಗೊತ್ತಿದ್ದರೆ ತಿಳಿಸಬೇಕಾಗಿ ಕೋರಿಕೆ.
ಬ್ಲಾಗ್ ಅಂದರೆ ಅದು ಜಾಲದಲ್ಲಿ ಇರುವ ಲೇಖ.ಇತರರು ತಮ್ಮ ಪ್ರತಿಕ್ರಿಯೆಗಳೊಂದಿಗೆ ಆ ಜಾಲದಲ್ಲಿ ಲೇಖಗಳನ್ನು ತುಂಬಿಸುತ್ತ
ಹೋಗಬಹುದು.ಸಂಸ್ಕ್ರತವನ್ನು ಕಂಡರಾಗದವರು ಈ ಹೆಸರನ್ನು ಒಪ್ಪಲಾರರು.ಸದ್ಯಕ್ಕೆ ಅದಕ್ಕೇನೂ ಮಾಡಲಾಗದು.
ಕನ್ನಡದಲ್ಲಿ ಸಂಸ್ಕ್ರತದಿಂದ ಬಂದ ಪದಗಳನ್ನು ಬಳಸುವ ಬಗ್ಗೆ ಇರುವ ವಾದವಿವಾದಗಳ ಬಗ್ಗೆ ಒಮ್ಮೆ ಪುರುಸೊತ್ತಾದರೆ ಇಲ್ಲೇ ಚಿಂತಿಸೋಣ.
"ಚಿಂತನ ಬಯಲು" ಎಂಬ ಹೆಸರು
ಚಿಂತನ ಬಯಲು ನನ್ನ ಪುಸ್ತಕವನ್ನು ಪ್ರಕಟಿಸಿದ ಪ್ರಕಾಶನದ ಹೆಸರೂ ಹೌದು.ನನ್ನ ಆ ಪುಸ್ತಕ( ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ)ದ ಮುಖ್ಯ ಆಶಯ ಕೂಡ ಚಿಂತನೆ ಬಯಲಿನಲ್ಲಿ ಎಲ್ಲ ದಿಕ್ಕುಗಳಲ್ಲಿಯು ಹರಿವಂತಿರಬೇಕು ಎಂಬುದೇ ಆಗಿತ್ತು. ಆ ಆಶಯ ಎಷ್ಟು ಈಡೇರಿದೆ ಎಂಬುದು ನನಗೆ ಗೊತ್ತಿಲ್ಲ.ಚಿಂತನೆಗೆ ಕೇಂದ್ರವಾಗಲೀ ಪರಿಧಿಯಾಗಲೀ ಅಗತ್ಯವಿಲ್ಲ.ಚಿಂತನವೆಂಬುದು ಬಯಲಲ್ಲಿ ಬಯಲಾಗಬೇಕಾದುದು.ಎಷ್ಟೇ ದೊಡ್ಡ ಚಿಂತನೆಯಾದರೂ ಕೊನೆಗೆ ಬಯಲೇ ಅಂದರೆ,ಶೂನ್ಯವೇ ಆಗಬೇಕಷ್ಟೆ.ಇಂಥ ದೊಡ್ಡ ಫಿಲಾಸಫಿಗಳೆಲ್ಲ ಸದ್ಯಕ್ಕೆ ಬದಿಗಿರಲಿ. ನಮ್ಮ ಮುಂದಿರುವ ಜಗತ್ತನ್ನು ನೋಡುವಾಗ ಎಷ್ಟೋ ಸಲ ಏನೇನೋ ಅಂದುಕೊಳ್ಳುತ್ತೇವೆ. ಅಂದುಕೊಂಡದ್ದನ್ನೆಲ್ಲ ಹೇಳಲು ಸಾಧ್ಯವಿಲ್ಲ ಬಿಡಿ. ಆದರೆ ಕೆಲವನ್ನು ಹೇಳಲೇಬೇಕು ಅನಿಸುತ್ತಲ್ಲ ಅವನ್ನು ಹೇಳಬೇಕಾಗುತ್ತದೆ.
ಈ ಜಾಲಲೇಖದಲ್ಲಿ, ನನಗೆ ಹೇಳಲೇಬೇಕು ಅನ್ನಿಸಿದ ವಿಚಾರಗಳನ್ನು ಹೇಳಬೇಕು ಅಂತ ಅಂದುಕೊಂಡಿದ್ದೇನೆ.
ಬೇರೆ ಕಡೆ ಹೇಳಲಾಗದ್ದನ್ನು ಇಲ್ಲೇ ಹೇಳಬೇಕಷ್ಟೆ.ಅಂದರೆ, ಎಷ್ಟೋ ವಿಷಯಗಳನ್ನು ಪತ್ರಿಕೆಗಳು ಪ್ರಕಟಿಸಲಾರವು;ಅಂಥವುಗಳನ್ನು ಹೇಳಲು ಇದು ಒಂದು ಒಳ್ಳೆ ಜಾಗ. ಉದಾಹರಣೆಗೆ, ದೊಡ್ಡ ಪ್ರಶಸ್ತಿ ಪಡೆದ,ಎ.ಎನ್.ಮುರ್ತಿರಾಯರ "ದೇವರು" ಒಂದು ಬಾಲಿಶ ಪುಸ್ತಕ ಅಂತ ಹೇಳಿದರೆ ಹೇಗಾದೀತು ?
ಮುರ್ತಿರಾಯರ "ದೇವರು"
ಮುರ್ತಿರಾಯರು ದೊಡ್ಡ ಲೇಖಕರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಪುಸ್ತಕ ಮಾತ್ರ ಅವರ ಕೀರ್ತಿಯನ್ನು ಹೆಚ್ಚಿಸುವಂಥದ್ದಲ್ಲ. ದೇವರು ಇಲ್ಲವಲ್ಲ ಅಂತ ವಿಷಾದದಿಂದ ಬರೆಯುತ್ತಿದ್ದೇನೆ ಎಂದು ಲೇಖಕರು ಹೇಳ್ತಾರೆ.ಆ ವಿಷಾದದಿಂದಲೇ ಹಿಂದಿನವರು ದೇವರನ್ನು ಸ್ರಷ್ಟಿ ಮಾಡಿದ್ದು ಅಂತ ಅವರೇನೂ ಯೋಚನೆ ಮಾಡೋದಿಲ್ಲ.ದೇವರ ಕುರಿತ ನಂಬಿಕೆಗಳ ಬಗ್ಗೆ ಹೇಳುವಾಗ ಗಿಡ ಮರ ಪ್ರಾಣಿಗಳೆಲ್ಲ ದೇವರಾಗುವ ಬಗ್ಗೆ ಗೇಲಿ ಮಾಡ್ತಾರೆ.ದೇವರ ಅಸ್ತಿತ್ವ ನಿರಾಕರಿಸಲು ತರ್ಕವನ್ನು ಬಾಲಿಶವಾಗಿ ಬಳಸಿಕೊಳ್ತಾರೆ. ಉದಾ:ಪು.೪೬. ವೈಚಾರಿಕವಾಗಿ ,ವೈಜ್ಞಾನಿಕವಾಗಿ,ಕಾರ್ಯಕಾರಣನಿಯಮದ ಆಧಾರದಲ್ಲಿ ದೇವರ ಅಸ್ತಿತ್ವ ನಿರಾಕರಿಸುವುದಾದರೆ ಅದಕ್ಕೆ ಒಂದು ಪುಸ್ತಕ ಬೇಡ. ೪-೫ ವಾಕ್ಯಗಳು ಸಾಕು.ಡಿ.ವಿ.ಜಿ.ಯವರ ಪುಸ್ತಕಕ್ಕೆ ಪ್ರತಿಕ್ರಿಯೆಯಾಗಿ ಬರೆದದ್ದು ಎನ್ನುತ್ತಾರೆ.ಡಿ.ವಿ.ಜಿ.ಯವರು ಮಿಥಕಗಳನ್ನು ಇಷ್ಟು ಸರಳವಾಗಿ ವ್ಯಾಖ್ಯಾನಿಸುವುದಿಲ್ಲ.ರಾಮಾಯಣ ಮಹಾಭಾರತಗಳನ್ನು ಕಾವ್ಯವಾಗಿ ಓದಬೇಕೆಂದು ಡಿ.ವಿ.ಜಿ. ಹೇಳುತ್ತಾರೆ."ದೇವರು" ಹೇಗೆ ಒಂದು ಕಳಪೆ ಪುಸ್ತಕ ಅಂತ ಗೊತ್ತಾಗಬೇಕಾದರೆ ಇದಕ್ಕಿಂತಲೂ ೨ ವರ್ಷ ಮೊದಲೇ ಪ್ರಕಟವಾದ ಗೌರೀಶ ಕಾಯ್ಕಿಣಿಯವರ" ನಾಸ್ತಿಕನು ಮತ್ತು ದೇವರು "
ಎಂಬ ಉತ್ತಮ ಪುಸ್ತಕ ನೋಡಬೇಕು.ಕಾಯ್ಕಿಣಿಯವರ ಪುಸ್ತಕದೆದುರು ಇದೇನೂ ಅಲ್ಲ.
೮೦ ವರ್ಷ ಪ್ರಾಯ ಕಳೆದ ಮೇಲೆ ಮುರ್ತಿರಾಯರು ಇಂಥ ಬಾಲಿಶ ಪುಸ್ತಕ ಬರೆದದ್ದು ಆಶ್ಚರ್ಯವಲ್ಲ;ಅದಕ್ಕೆ ಕನ್ನಡದ ದೊಡ್ಡ ಪ್ರಶಸ್ತಿ ಸಿಕ್ಕಿದ್ದೂ ಆಶ್ಚರ್ಯವಲ್ಲ; ಕನ್ನಡದ ಸದ್ಯದ ವಿಮರ್ಶಾಲೋಕವನ್ನು ನೋಡಿದರೆ.
ವೈಯೆನ್ಕೆಯವರು" ಕೊನೆಸಿಡಿ"ಅಂತ ಕೊನೆಗೊಂದು ಭಾಗ ಬರೆಯುತ್ತಿದ್ದುದು ನಿಮಗೆ ಗೊತ್ತಿರಬಹುದು.ಹಾಗೆ ಇಲ್ಲೊಂದು "ಕೊನೆಬೆಡಿ"ಯಿದೆ.ಕೊನೆಬೆಡಿಯೆಂಬುದು ನಾನು ಮತ್ತು ನನ್ನ ಕ್ಲೋಸು ಫ್ರೆಂಡು ಕೆ.ಎಸ್.ರವಿಪ್ರಕಾಶ್ ಸುಮಾರು ೨೦ ವರ್ಷಗಳ ಹಿಂದೆ ಪರಸ್ಪರ ಪತ್ರ ಬರೆವಾಗ ಕೊನೆಯಲ್ಲಿ ಸಿಡಿಸುತ್ತಿದ್ದ ಬೆಡಿ.ಈ ಶಬ್ದವನ್ನು ಬಹುಶಃ ಮೊದಲು ಬಳಸಿದ್ದು ಅವನೆ ಇರಬೇಕು.ಈಗ ನಾವಿಬ್ಬರೂ ಪರಸ್ಪರ ಕಳೆದುಹೋಗಿದ್ದೇವೆ.( ಅವನ ಈ ಮೇಲ್ ಐಡಿಯನ್ನು ಯಾರಾದರೂ ನೀಡಿದರೆ ಕ್ರತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು).
ಕೊನೆಬೆಡಿ:
ನನಗೆ ಹಣ್ಣು ಹಣ್ಣು ಮುದುಕರನ್ನು ಕಂಡರೆ ಅಸೂಯೆಯಾಗುತ್ತದೆ ಯಾಕೆಂದರೆ ನನಗೆ ಅಷ್ಟು ಮುದುಕನಾಗುವ ಭರವಸೆಯಿಲ್ಲ.