ಸೋಮವಾರ, ನವೆಂಬರ್ 30, 2009






ಶೂನ್ಯದೊಳಗೆ
ಬ್ರಹ್ಮಾಂಡ
ಕಂಡು
ಕಾಣದ್ದನ್ನು
ಕಂಡೆ
ಎನ್ನದೆ
ಕಂಡದ್ದನ್ನು
ಬಯಲಾಗಿಸಿದ
ಎಲ್ಲ
ತತ್ವಜ್ಞಾನಿಗಳಿಗೆ
ನಮಸ್ಕಾರ
.

ಕನ್ನಡ
ಕೀಲಿಮಣೆ
ಪ್ರಮಾಣಬದ್ಧ
ಮಾಡಿದ
ಕಿನ್ನಿಕಂಬಳ
ರಾಯರಿಗೆ
ನಮೋನ್ನಮಃ
.

"ಜಾಲಲೇಖ"ವೆಂಬ ಹೆಸರು
ಇಂಗ್ಲಿಶಿನಲ್ಲಿ ಬ್ಲಾಗ್ ಎಂದು ಕರೆಯುವುದನ್ನು ಕನ್ನಡದಲ್ಲಿ ಜಾಲಲೇಖವೆಂದು ಕರೆಯಬಹುದೆಂದು ನನಗೆ ತೋರುತ್ತದೆ.
ಜಾಲತಾಣ ಎಂದು ಕರೆದ ಹಾಗೆ ಇದು.ಲೇಖಜಾಲ ಎಂದೂ ಕರೆಯಬಹುದಾಗಿತ್ತು; ಆದರೆ,ಆಗ ಜಾಲಕ್ಕೇ ಹೆಚ್ಚು ಮಹತ್ವ ಕೊಟ್ಟ ಹಾಗೆ ಆಗುತ್ತದೆ ಅಂತ ನನ್ನ ಅಂದಾಜು.ಬೇರಾರಾದರೂ ಈಹೆಸರು ಅಥವಾ ಬೇರೆ ಯಾವುದಾದರೂ ಹೆಸರನ್ನು ಬ್ಲಾಗ್ ಗೆ ಕನ್ನಡದಲ್ಲಿ ಈಗಾಗಲೇ ಇಟ್ಟಿದ್ದಾರೆಯೇ ಅಂತ ನನಗೆ ಗೊತ್ತಿಲ್ಲ. ಯಾರಾದರೂ ಗೊತ್ತಿದ್ದರೆ ತಿಳಿಸಬೇಕಾಗಿ ಕೋರಿಕೆ.
ಬ್ಲಾಗ್ ಅಂದರೆ ಅದು ಜಾಲದಲ್ಲಿ ಇರುವ ಲೇಖ.ಇತರರು ತಮ್ಮ ಪ್ರತಿಕ್ರಿಯೆಗಳೊಂದಿಗೆ ಆ ಜಾಲದಲ್ಲಿ ಲೇಖಗಳನ್ನು ತುಂಬಿಸುತ್ತ
ಹೋಗಬಹುದು.ಸಂಸ್ಕ್ರತವನ್ನು ಕಂಡರಾಗದವರು ಈ ಹೆಸರನ್ನು ಒಪ್ಪಲಾರರು.ಸದ್ಯಕ್ಕೆ ಅದಕ್ಕೇನೂ ಮಾಡಲಾಗದು.
ಕನ್ನಡದಲ್ಲಿ ಸಂಸ್ಕ್ರತದಿಂದ ಬಂದ ಪದಗಳನ್ನು ಬಳಸುವ ಬಗ್ಗೆ ಇರುವ ವಾದವಿವಾದಗಳ ಬಗ್ಗೆ ಒಮ್ಮೆ ಪುರುಸೊತ್ತಾದರೆ ಇಲ್ಲೇ ಚಿಂತಿಸೋಣ.
"ಚಿಂತನ ಬಯಲು" ಎಂಬ ಹೆಸರು
ಚಿಂತನ ಬಯಲು
ನನ್ನ ಪುಸ್ತಕವನ್ನು ಪ್ರಕಟಿಸಿದ ಪ್ರಕಾಶನದ ಹೆಸರೂ ಹೌದು.ನನ್ನ ಆ ಪುಸ್ತಕ( ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ)ದ ಮುಖ್ಯ ಆಶಯ ಕೂಡ ಚಿಂತನೆ ಬಯಲಿನಲ್ಲಿ ಎಲ್ಲ ದಿಕ್ಕುಗಳಲ್ಲಿಯು ಹರಿವಂತಿರಬೇಕು ಎಂಬುದೇ ಆಗಿತ್ತು. ಆ ಆಶಯ ಎಷ್ಟು ಈಡೇರಿದೆ ಎಂಬುದು ನನಗೆ ಗೊತ್ತಿಲ್ಲ.ಚಿಂತನೆಗೆ ಕೇಂದ್ರವಾಗಲೀ ಪರಿಧಿಯಾಗಲೀ ಅಗತ್ಯವಿಲ್ಲ.ಚಿಂತನವೆಂಬುದು ಬಯಲಲ್ಲಿ ಬಯಲಾಗಬೇಕಾದುದು.ಎಷ್ಟೇ ದೊಡ್ಡ ಚಿಂತನೆಯಾದರೂ ಕೊನೆಗೆ ಬಯಲೇ ಅಂದರೆ,ಶೂನ್ಯವೇ ಆಗಬೇಕಷ್ಟೆ.ಇಂಥ ದೊಡ್ಡ ಫಿಲಾಸಫಿಗಳೆಲ್ಲ ಸದ್ಯಕ್ಕೆ ಬದಿಗಿರಲಿ. ನಮ್ಮ ಮುಂದಿರುವ ಜಗತ್ತನ್ನು ನೋಡುವಾಗ ಎಷ್ಟೋ ಸಲ ಏನೇನೋ ಅಂದುಕೊಳ್ಳುತ್ತೇವೆ. ಅಂದುಕೊಂಡದ್ದನ್ನೆಲ್ಲ ಹೇಳಲು ಸಾಧ್ಯವಿಲ್ಲ ಬಿಡಿ. ಆದರೆ ಕೆಲವನ್ನು ಹೇಳಲೇಬೇಕು ಅನಿಸುತ್ತಲ್ಲ ಅವನ್ನು ಹೇಳಬೇಕಾಗುತ್ತದೆ.
ಈ ಜಾಲಲೇಖದಲ್ಲಿ, ನನಗೆ ಹೇಳಲೇಬೇಕು ಅನ್ನಿಸಿದ ವಿಚಾರಗಳನ್ನು ಹೇಳಬೇಕು ಅಂತ ಅಂದುಕೊಂಡಿದ್ದೇನೆ.

ಬೇರೆ ಕಡೆ ಹೇಳಲಾಗದ್ದನ್ನು ಇಲ್ಲೇ ಹೇಳಬೇಕಷ್ಟೆ.ಅಂದರೆ, ಎಷ್ಟೋ ವಿಷಯಗಳನ್ನು ಪತ್ರಿಕೆಗಳು ಪ್ರಕಟಿಸಲಾರವು;ಅಂಥವುಗಳನ್ನು ಹೇಳಲು ಇದು ಒಂದು ಒಳ್ಳೆ ಜಾಗ. ಉದಾಹರಣೆಗೆ, ದೊಡ್ಡ ಪ್ರಶಸ್ತಿ ಪಡೆದ,ಎ.ಎನ್.ಮುರ್ತಿರಾಯರ "ದೇವರು" ಒಂದು ಬಾಲಿಶ ಪುಸ್ತಕ ಅಂತ ಹೇಳಿದರೆ ಹೇಗಾದೀತು ?
ಮುರ್ತಿರಾಯರ "ದೇವರು"
ಮುರ್ತಿರಾಯರು ದೊಡ್ಡ ಲೇಖಕರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಪುಸ್ತಕ ಮಾತ್ರ ಅವರ ಕೀರ್ತಿಯನ್ನು ಹೆಚ್ಚಿಸುವಂಥದ್ದಲ್ಲ. ದೇವರು ಇಲ್ಲವಲ್ಲ ಅಂತ ವಿಷಾದದಿಂದ ಬರೆಯುತ್ತಿದ್ದೇನೆ ಎಂದು ಲೇಖಕರು ಹೇಳ್ತಾರೆ.ಆ ವಿಷಾದದಿಂದಲೇ ಹಿಂದಿನವರು ದೇವರನ್ನು ಸ್ರಷ್ಟಿ ಮಾಡಿದ್ದು ಅಂತ ಅವರೇನೂ ಯೋಚನೆ ಮಾಡೋದಿಲ್ಲ.ದೇವರ ಕುರಿತ ನಂಬಿಕೆಗಳ ಬಗ್ಗೆ ಹೇಳುವಾಗ ಗಿಡ ಮರ ಪ್ರಾಣಿಗಳೆಲ್ಲ ದೇವರಾಗುವ ಬಗ್ಗೆ ಗೇಲಿ ಮಾಡ್ತಾರೆ.ದೇವರ ಅಸ್ತಿತ್ವ ನಿರಾಕರಿಸಲು ತರ್ಕವನ್ನು ಬಾಲಿಶವಾಗಿ ಬಳಸಿಕೊಳ್ತಾರೆ. ಉದಾ:ಪು.೪೬. ವೈಚಾರಿಕವಾಗಿ ,ವೈಜ್ಞಾನಿಕವಾಗಿ,ಕಾರ್ಯಕಾರಣನಿಯಮದ ಆಧಾರದಲ್ಲಿ ದೇವರ ಅಸ್ತಿತ್ವ ನಿರಾಕರಿಸುವುದಾದರೆ ಅದಕ್ಕೆ ಒಂದು ಪುಸ್ತಕ ಬೇಡ. ೪-೫ ವಾಕ್ಯಗಳು ಸಾಕು.ಡಿ.ವಿ.ಜಿ.ಯವರ ಪುಸ್ತಕಕ್ಕೆ ಪ್ರತಿಕ್ರಿಯೆಯಾಗಿ ಬರೆದದ್ದು ಎನ್ನುತ್ತಾರೆ.ಡಿ.ವಿ.ಜಿ.ಯವರು ಮಿಥಕಗಳನ್ನು ಇಷ್ಟು ಸರಳವಾಗಿ ವ್ಯಾಖ್ಯಾನಿಸುವುದಿಲ್ಲ.ರಾಮಾಯಣ ಮಹಾಭಾರತಗಳನ್ನು ಕಾವ್ಯವಾಗಿ ಓದಬೇಕೆಂದು ಡಿ.ವಿ.ಜಿ. ಹೇಳುತ್ತಾರೆ."ದೇವರು" ಹೇಗೆ ಒಂದು ಕಳಪೆ ಪುಸ್ತಕ ಅಂತ ಗೊತ್ತಾಗಬೇಕಾದರೆ ಇದಕ್ಕಿಂತಲೂ ೨ ವರ್ಷ ಮೊದಲೇ ಪ್ರಕಟವಾದ ಗೌರೀಶ ಕಾಯ್ಕಿಣಿಯವರ" ನಾಸ್ತಿಕನು ಮತ್ತು ದೇವರು "
ಎಂಬ ಉತ್ತಮ ಪುಸ್ತಕ ನೋಡಬೇಕು.ಕಾಯ್ಕಿಣಿಯವರ ಪುಸ್ತಕದೆದುರು ಇದೇನೂ ಅಲ್ಲ.
೮೦ ವರ್ಷ ಪ್ರಾಯ ಕಳೆದ ಮೇಲೆ ಮುರ್ತಿರಾಯರು ಇಂಥ ಬಾಲಿಶ ಪುಸ್ತಕ ಬರೆದದ್ದು ಆಶ್ಚರ್ಯವಲ್ಲ;ಅದಕ್ಕೆ ಕನ್ನಡದ ದೊಡ್ಡ ಪ್ರಶಸ್ತಿ ಸಿಕ್ಕಿದ್ದೂ ಆಶ್ಚರ್ಯವಲ್ಲ; ಕನ್ನಡದ ಸದ್ಯದ ವಿಮರ್ಶಾಲೋಕವನ್ನು ನೋಡಿದರೆ.
ವೈಯೆನ್ಕೆಯವರು" ಕೊನೆಸಿಡಿ"ಅಂತ ಕೊನೆಗೊಂದು ಭಾಗ ಬರೆಯುತ್ತಿದ್ದುದು ನಿಮಗೆ ಗೊತ್ತಿರಬಹುದು.ಹಾಗೆ ಇಲ್ಲೊಂದು "ಕೊನೆಬೆಡಿ"ಯಿದೆ.ಕೊನೆಬೆಡಿಯೆಂಬುದು ನಾನು ಮತ್ತು ನನ್ನ ಕ್ಲೋಸು ಫ್ರೆಂಡು ಕೆ.ಎಸ್.ರವಿಪ್ರಕಾಶ್ ಸುಮಾರು ೨೦ ವರ್ಷಗಳ ಹಿಂದೆ ಪರಸ್ಪರ ಪತ್ರ ಬರೆವಾಗ ಕೊನೆಯಲ್ಲಿ ಸಿಡಿಸುತ್ತಿದ್ದ ಬೆಡಿ.ಈ ಶಬ್ದವನ್ನು ಬಹುಶಃ ಮೊದಲು ಬಳಸಿದ್ದು ಅವನೆ ಇರಬೇಕು.ಈಗ ನಾವಿಬ್ಬರೂ ಪರಸ್ಪರ ಕಳೆದುಹೋಗಿದ್ದೇವೆ.( ಅವನ ಈ ಮೇಲ್ ಐಡಿಯನ್ನು ಯಾರಾದರೂ ನೀಡಿದರೆ ಕ್ರತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು).
ಕೊನೆಬೆಡಿ:
ನನಗೆ ಹಣ್ಣು ಹಣ್ಣು ಮುದುಕರನ್ನು ಕಂಡರೆ ಅಸೂಯೆಯಾಗುತ್ತದೆ ಯಾಕೆಂದರೆ ನನಗೆ ಅಷ್ಟು ಮುದುಕನಾಗುವ ಭರವಸೆಯಿಲ್ಲ.