ಸೋಮವಾರ, ಜನವರಿ 4, 2010

ಹಾವು ಮುಂಗುಸಿ ಕಾಳಗ

ನಿಸರ್ಗದೊಂದಿಗೆ ಬದುಕುವುದು ಹೇಗೆ?
ನನ್ನ ಮತ್ತು ನನ್ನ ಮನೆಯವರದು ಸ್ವಲ್ಪಮಟ್ಟಿಗೆ ಅಂಥ ಬದುಕೇ ಆದಂತೆ ಕಾಣುತ್ತದೆ ನನಗೆ.
ಯಾಕೆ ಗೊತ್ತಾ?
ನಮ್ಮ ಮನೆಯೊಳಗೆ ಎಂದೂ ಇರುವೆ ತಪ್ಪೋದಿಲ್ಲ.ನನ್ನ ಹೆಂಡತಿ ರೇಶ್ಮಾ ಅಡಿಗೆ ಕೋಣೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಇರುವೆಗಳಿಗೆ ನಮ್ಮ ಮೇಲೆ ಅದೇನೋ ಪ್ರೀತಿ.
ನಮ್ಮದು ಸ್ವಲ್ಪ ಸಾವಯವ ಮನಸ್ಸಾದುದರಿಂದ ವಿಷ ಹಾಕಿ ಕೊಲ್ಲುವುದು ಅಷ್ಟು (ಮುಖ್ಯವಾಗಿ ನನ್ನ ಹೆಂಡತಿಗೆ ) ಒಪ್ಪಿಗೆಯಿಲ್ಲ.
ಇನ್ನು ಹಲ್ಲಿಗಳು ಮನೆಯೊಳಗೆ ಬೇಕಾದಷ್ಟಿವೆ.
ಜೇಡಗಳಿಗೂ ನಮ್ಮ ಹಂಚಿನ ಮನೆಯೆಂದರೆ ತುಂಬಾ ಇಷ್ಟ.ನಮ್ಮ ಮನೆಯಲ್ಲಿ ಬಲೆ ಇದ್ರೆ ಅದು ನಮ್ಮ ಪರಿಸರ ಪ್ರೀತಿಯ ದ್ಯೋತಕ ಅಂತ ತಾವು ತಿಳಿಯುವುದು.
ನಮ್ಮದು ಹಂಚಿನ ಮನೆಯಾದ್ದರಿಂದ ಇಲಿಗಳು ಅಟ್ಟದಲ್ಲಿ ದಿನವೂ ರಾತ್ರಿ ಓಡಾಡುವ ಸದ್ದು ಕೇಳುತ್ತಲೇ ನಾವು ನಿದ್ದೆ ಮಾಡುತ್ತೇವೆ.ಇಲಿ- ಬೆಕ್ಕುಗಳ ರನ್ನಿಂಗ್ ರೇಸಲ್ಲಿ ಯಾರು ಗೆದ್ದರು ಅಂತ ನಮಗೆ ಗೊತ್ತಾಗೋದಿಲ್ಲ.ಬಹುಶಃ ಇಲಿಯೇ ಗೆಲ್ಲುತ್ತೆ ಅನಿಸುತ್ತೆ.ಇಲ್ಲದಿದ್ರೆ ದಿನವೂ ರೇಸ್ ಇರುತ್ತಿರಲಿಲ್ಲ.
ಇಲಿಗೆ ಕೇಕು ಸಿಗುತ್ತದೆ ನಿಜ,ಆದರೆ ಅದನ್ನು ತಿಂದು ಇಲಿ ಮನೆಯೊಳಗೆ ಸತ್ತರೆ ? ಸತ್ತ ಇಲಿಯನ್ನು ಸಹಿಸಿಕೊಳ್ಳುವುದು ಬದುಕಿರುವ ಇಲಿಯನ್ನು ಸಹಿಸಿಕೊಳ್ಳುವುದಕ್ಕಿಂತ ಕಷ್ಟ. ಆದರೆ ಕೇಕು ತಯಾರಕರು ಹೇಳುವಂತೆ, ಅದನ್ನು ತಿಂದ ಇಲಿ ನೀರು ಹುಡುಕುತ್ತಾ ದೂರ ಹೋಗುತ್ತದಂತೆ .ಹಾಗೆ ದೂರ ಹೋಗಿ ಸಾಯುತ್ತದಂತೆ.ನೀರಿಗಾಗಿ ಅದು ನಮ್ಮ ಮನೆಯೊಳಗೇ ಹುಡುಕಿದರೆ ಅಂತ ನನ್ನ ಹೆದರಿಕೆ.
ಬಿ.ಸಿ.ರೋಡಿನಲ್ಲಿರುವ ನಮ್ಮ ಮನೆ ಸುಮಾರು ೪೫ ಸೆಂಟ್ಸ್ ಆವರಣದೊಳಗೆ ಇದೆ.
ಈ ಆವರಣದಲ್ಲಿ ಗೆದ್ದಲುಗಳ ಹಲವು ಹುತ್ತಗಳಿವೆ.ಗದ್ದಲು ರೈತನ ಮಿತ್ರನೇ? ಶತ್ರುವೇ? ನನಗೆ ಗೊತ್ತಿಲ್ಲ.
ಗೆದ್ದಲುಗಳ ವಾಸ್ತುತಜ್ಞ ಯಾರೋ? ಅದ್ಭುತ ಕಂಸ್ಟ್ರಕ್ಷನ್ ಅವುಗಳದು.
ಇನ್ನು ಕುಂಡೆಚ್ಚ , ಕೂರ್ಬಾಯಿಗಳು ಹೇಗೂ ಉಂಟಲ್ಲ.
ನಮ್ಮಲ್ಲಿ ಮುಳ್ಳು ಹಂದಿಯ ಮಾಟೆ ಕೂಡ ಒಂದುಂಟು.೪ವರ್ಷಗಳ ಹಿಂದೆ ಕಾಣಸಿಕ್ಕಿದ ಮುಳ್ಳಂದಿ ಮತ್ತೆ ಕಾಣಸಿಕ್ಕಿಲ್ಲ.
ಅವುಗಳಿಗೆ ಕಂತ್ರಾಟು ಕೊಟ್ಟರೆ ನಮ್ಮ ಸರಕಾರಿ ಕಟ್ಟಡಗಳ ಕೆಲಸ ಬಹು ಬೇಗ ಮುಗಿಯುತ್ತಿತ್ತು.
ಒಂದು ವೇಳೆ ಬಿದ್ದರೂ ಮರುದಿನವೇ ಅದನ್ನು ಪುನಃ ಕಟ್ಟಿ ನಿಲ್ಲಿಸುವ ತಾಕತ್ತು, ಕಾರ್ಯಕ್ಷಮತೆ ಅವುಗಳಿಗಿದೆ.
ನಮ್ಮ ಆವರಣದಲ್ಲಿ ದಿನವೂ ಬೆಳಗ್ಗೆ ವಿವಿಧ ಹಕ್ಕಿಗಳು ಕೂಗುತ್ತವೆ (ಅದನ್ನು ಕೇಳಲು ಬಹಳ ಬಾರಿ ನಾನು ಏಳದಿದ್ದರೂ.)
ರೆಂಜೆ ಮರದ ತುದಿಯಲ್ಲಿ ಕೂತ ಕೋಗಿಲೆ,ಅದರ ಧ್ವನಿಯನ್ನು ಅಣಕಿಸಿದರೆ ಮತ್ತೆ ಮತ್ತೆ ಕೂಗುವುದೇ ಒಂದು ಚಂದ.
ನನಗೆ ಹಕ್ಕಿಗಳ ಹೆಸರು ಗೊತ್ತಿಲ್ಲ. ಗುಬ್ಬಿ ಹಕ್ಕಿ ಸೇರಿದಂತೆ ಅನೇಕ ಹಕ್ಕಿಗಳು ಕಾಣಸಿಗುತ್ತವೆ.
ಎರಡು ಕಾಡುಕೋಳಿಗಳ ಒಂದು ಜೋಡಿಯು ತಿಂಗಳುಗಳ ಕಾಲ ನಮ್ಮ ಮನೆಯ ಸುತ್ತ ಮುತ್ತ ಇತ್ತು.
ಒಂದು ಸುಂದರ ಬೆಳಗ್ಗೆ ನೋಡುವಾಗ ಇರಲಿಲ್ಲ.
ಪಗೆಲ ಅಂತ ಒಂದು ನಿರುಪದ್ರವಿ ಪುಟ್ಟ ಹಾವು ಇದೆಯಲ್ಲ,ಅದು ಆಗಾಗ ಸುತ್ತು ಬರುತ್ತಾ ಇರುತ್ತದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ಮುರ್ನಾಲ್ಕು ಸಲ ನಾಗರಹಾವು ಕೂಡ ನಮ್ಮ ಅಂಗಳದಲ್ಲಿ ಹಾದು ಹೋಗಿದೆ. ಅದನ್ನು
ನೋಡಿದ ನಾಲ್ಕೈದು ದಿನಗಳ ಕಾಲ ಹಗಲು -ರಾತ್ರಿ ಕಿಟಕಿ ತೆರೆದಿಡಲೂ ಭಯ. ಆಮೇಲೆ ಮರೆತು ಹೋಗುತ್ತದೆ ನಿಧಾನವಾಗಿ.
ನಾಗರ ಹಾವು ರಾತ್ರಿ ಬರುವುದಿಲ್ಲವಂತೆ. ಬಹುಶಃ ಅದಕ್ಕೇ ಅದನ್ನು "ಒಳ್ಳೆಯದು" ಅಂತ ಕರೆಯುವುದು ಇರಬೇಕು.
ಕೇರೆ ಹಾವು ರಾತ್ರಿ ಮನೆಯೊಳಗೆ ನಿಂತರೆ ಭಾರಿ ಅದ್ರಷ್ಟವಂತೆ.ಆದ್ರೆ ಅದು ರಾತ್ರಿಗೆ ನಿಲ್ಲುದಿಲ್ಲವಂತೆ.
ರಾತ್ರಿ ತಿರುಗಾಡುವ ಹಾವುಗಳಿಗೆ ಬುದ್ಧಿ ಇಲ್ಲ. ಅದಕ್ಕೇ ಅವುಗಳಿಗೆ ಕುರೆಕಂದಡಿ, ಕಟ್ಟಮಲಕ್ಕಡಿ ಇತ್ಯಾದಿ ಕೊಳಕು ಹೆಸರುಗಳು
ಅಂತ ಕಾಣುತ್ತೆ.(ಹೆಸರಿನಲ್ಲೇನಿದೆ? ಗುಲಾಬಿಯನ್ನು ಯಾವ ಹೆಸರಿನಲ್ಲಿ ಕರೆದರೇನು ಅಂತೀರಾ)
ಈಗ ಇದನ್ನು ಕಂಪ್ಯೂಟರಿನಲ್ಲಿ ಕುಟ್ಟುತ್ತಿರುವಾಗ ಮೇಜಿನ ಅಡಿಗೆ ಬಗ್ಗಿ ನೋಡುತ್ತಿದ್ದೇನೆ ಆಗಾಗ,ಯಾಕೆಂದರೆ ಬಾಗಿಲು ತೆರೆದೇ ಇದೆ ,ಹಾವು ನುಗ್ಗಿಲ್ಲವೆಂದು ಖಾತರಿ ಮಾಡಿಕೊಳ್ಳಬೇಕಲ್ಲ?
ಕತ್ತಲೆಯಲ್ಲಿ ಒಂಥರಾ ಹೆದರಿಕೆ. ಯಾಕೆಂದ್ರೆ ಕಣ್ಣು ಕಾಣುವುದಿಲ್ಲಲ್ಲಾ? ಅಲ್ಲದಿದ್ರೆ ಯಾರು ಹೆದರ್ತಾರೆ?
ಸತ್ಯ ಹೇಳ್ತೇನೆ, ಕಾಳಿಂಗ, ನಾಗರದಂಥ ಹಾವುಗಳ ಬಗ್ಗೆ ನನಗೆ ಪ್ರೀತಿಯಿಲ್ಲ.ಭೀತಿ ಮಾತ್ರ ಇರೋದು.
ಅಂದ ಹಾಗೆ ಗದ್ದೆಗಳಲ್ಲಿ ಇಲಿಗಳನ್ನು ಹಿಡಿಯಲು ಕೇರೆಗಳ ವಂಶಾಭಿವ್ರದ್ಧಿ ಮಾಡಿದರೆ ಹೇಗೆ? ಕೇರೆಗಳಂಥ ವಿಷವಿಲ್ಲದ ಹಾವುಗಳು ಹೆಚ್ಚಾದರೆ ವಿಷದ ಹಾವುಗಳ ಸಾಂಧ್ರತೆ ಕಡಿಮೆ ಆದೀತೋ ಏನೋ? ಪರಿಸರ ಸಮತೋಲನಕ್ಕೆ ವಿಷದ ಹಾವುಗಳೂ ಬೇಕು ಅಂತ ಯಾರದ್ರೂ ಹೇಳೂದಾದ್ರೆ ಓಕೆ ಅಂತ, ಮನಸ್ಸಿಲ್ಲದ ಮನಸ್ಸಲ್ಲಿ ಎಲ್ಲರ ಹಾಗೆ , (ಪರಿಸರವಿರೋಧಿ ಅನ್ನಿಸಿಕೊಳ್ಳುವ ಧೈರ್ಯವಿಲ್ಲದೆ !?)ನಾನೂ ಒಪ್ಪಬೇಕಷ್ಟೆ:
ಮನಃಪೂರ್ವಕವಾಗಿ ಅಲ್ಲ.

ಕಳೆದ ಸುಮಾರು ಐದು ವರ್ಷಗಳಿಂದ ನಮಗೆ ಅಂಗಳದಲ್ಲಿ ನಿತ್ಯವೂ ಕಾಣಸಿಗುವ ಪ್ರಾಣಿಗಳೆಂದರೆ ಮುಂಗುಸಿಗಳು.
ಮುಂಗುಸಿಗಳ ಸಂಸಾರದ ಸವಾರಿ ನೋಡುವುದೇ ಒಂದು ಚಂದ!!!
ಆರಂಭದಲ್ಲಿ ಗಂಡು-ಹೆಣ್ಣು ಮಾತ್ರ ಇದ್ದವು. ಕೆಲ ಸಮಯದ ನಂತರ ತಾಯಿ-ತಂದೆಯ ಜೊತೆ ನಾಲ್ಕು ಮರಿಗಳು ಸಾಲಾಗಿ ಹೋಗುತ್ತಿದ್ದವು.ಮರಿಗಳು ದೊಡ್ಡವಾದ ಬಳಿಕ ತಂದೆ ತಾಯಿ ಜೊತೆಯಲ್ಲಿ ಕಾಣುವುದಿಲ್ಲ. ಆದ್ರೆ ಎರಡೆರಡು ಮುಂಗುಸಿಗಳು ಈಗಲೂ ತಿರುಗಾಡುತ್ತವೆ.ಸಲಿಂಗಿಗಳೋ ಅನ್ಯಲಿಂಗಿಗಳೋ ಗೊತ್ತಿಲ್ಲ.(ಅನ್ಯಕೋಮಲ್ಲದಿದ್ದರೆ ಯಾರ ಹೆದರಿಕೆಯೂ ಅವಕ್ಕಿಲ್ಲ ಬಿಡಿ.)

ಹಾವು -ಮುಂಗುಸಿಗಳು ಬದ್ಧ ವೈರಿಗಳು ಎಣ್ದು ಎಲ್ಲ ಕಡೆ ಕೇಳಿದ್ದೇವೆ ನಾವು.ಅದು ವಾಸ್ತವವೇ ಎಂಬುದು ನನಗೆ ಗೊತ್ತಿರಲಿಲ್ಲ.
ಗೊತ್ತಾಗುವ ಪ್ರಸಂಗವೂ ಬಂತು ನೋಡಿ!!
ನಮ್ಮ ಮನೆಯಂಗಳದ ಬದಿಯಲ್ಲೇ ನಡೆದ ದೊಡ್ಡದೊಂದು ಕಾಳಗವೇ ಇದನ್ನು ನಿರೂಪಿಸಿತು. ಒಂದು ದಿನ ರೇಶ್ಮಾ ನನ್ನನ್ನೂ ಮಕ್ಕಳನ್ನೂ ಇಲ್ಲಿ ಬನ್ನಿ! ಇಲ್ಲಿ ಬನ್ನಿ! ಎಂದು ತುಸು ಆಶ್ಚರ್ಯ, ತುಸು ಸಂಭ್ರಮ , ತುಸು ಆತಂಕದಿಂದ ಕರೆದಳು.ನಾವೆಲ್ಲ ಮನೆಯ ಬಡಗು ದಿಕ್ಕಿನ ಬಾಗಿಲಿಗೆ ಬಂದಾಗ ಸುಮಾರು ಇಪ್ಪತ್ತೇ ಅಡಿಗಳ ದೂರದಲ್ಲಿ ಒಂದು ನಾಗರಹಾವು ಮತ್ತು ಒಂದು ಮುಂಗುಸಿ ಕಾದಾಡುತ್ತಿದ್ದವು.ಹಾವು ಹೆಡೆಯೆತ್ತಿ ಎತ್ತಿ ಹೊಡೆಯಲು ಯತ್ನಿಸುತ್ತಿತ್ತು.ಮುಂಗುಸಿ ಬಾಲದ ಮೇಲೆಯೇ ನಿಂತಂತೆ
ಎದ್ದೆದ್ದು ನಿಂತು ಹಾವನ್ನು ಮಣಿಸಲು ಯತ್ನಿಸುತ್ತಿತ್ತು. ಮುರ್ನಾಲ್ಕು ನಿಮಿಷಗಳ ಕಾಲ ಹೀಗೆ ನಡೆಯಿತು.ಆಮೇಲೆ ಬಹುಶಃ ನಮ್ಮ(ಪ್ರೇಕ್ಷಕರ) ಇರುವಿಕೆ ಅವುಗಳ ಗಮನಕ್ಕೆ ಬಂದು ಒಂದೀಚೆ ಒಂದಾಚೆ ಹೋದವು.ಯಾರೂ ಗೆಲ್ಲಲಿಲ್ಲ.ಯಾರೂ ಸೋಲಲಿಲ್ಲ.
ಹಾವು ಸಾಯದ್ದರಿಂದ ನಾನು ಗೆದ್ದೆ!!!!ಅಲ್ಲದಿದ್ರೆ ,ಅದರ ಬೊಜ್ಜ ಇತ್ಯಾದಿ....ಬೇಕೋ ಬೇಡವೋ ಒಟ್ಟಿನಲ್ಲಿ ತಲೆ ಹಾಳಾಗುತ್ತಿತ್ತು.
ಬೆಂಗ್ಳೂರಂಥ ಪೇಟೆಗಳಲ್ಲಿಯೇ ಹಾವುಗಳ ಉಪದ್ರ ತುಂಬಾ ಉಂಟಂತೆ.
ಬೆಂಗ್ಳೂರಲ್ಲಿ ನಮ್ಮ ನೆಂಟರೊಬ್ಬರ ಮನೆಯಲ್ಲಿ ಹಾವು ಬಂದಿದ್ದಾಗ ಹಾವು ಹಿಡಿವವನಿಗೆ ಫೋನು ಮಾಡಿದ್ರು. ಆಗ ಅವನು ಹೇಳಿದ್ದು-" ಇಲ್ಲೊಂದು ಹಾವು ಹಿಡೀತಾ ಇದ್ದೇನೆ, ಈಗ ಬರ್ತೇನೆ "ಅಂತ. ಆಮೇಲೆ ಇವರಲ್ಲಿ ಹಾವಿನ ಬಾಲವನ್ನು ಎಡಗೈಯಲ್ಲಿ ಹಿಡಿದು ಚೀಲಕ್ಕೆ ತುಂಬುತ್ತಿದ್ದಾಗ ಅವನಿಗೆ ಫೋನು ಬಂತು. ಹೇಳುತ್ತಿದ್ದ-" ಹಾವಾ? ಈಗ ಬರ್ತೇನೆ, ಈ ಹಾವನ್ನು ಎಲ್ಲಾದ್ರೂ ಬಿಟ್ಟು ಬರ್ಬೇಕಷ್ಟೆ." ಅಂತ.ಅವನು ಅಲ್ಲಿ ತಲುಪಿ ಆ ಹಾವನ್ನು ಹಿಡಿದಾಗುವಾಗ ಇವನು ಬಿಟ್ಟಲ್ಲಿಂದ ಮತ್ತೆ ಫೋನು ಬರಬಹುದು.!! ಹಾವಿಗೆ ಹಳ್ಳಿ ಅಂತಿಲ್ಲ , ದಿಲ್ಲಿ ಅಂತಿಲ್ಲ ಬಿಡಿ.
ಒಂದು ನರಹುಳುವೂ ಅಪ್ಪಣೆ ವಿನಃ ಪ್ರವೇಶಿಸಲಾರದ ಮಂತ್ರಿಗಳ ಮನೆ ಕಂಪೌಂಡಿನ ಒಳಗೆ ಪೋಲೀಸರ ಕಣ್ಣು ತಪ್ಪಿಸಿ ನಾಗರಹಾವು ನುಗ್ಗಿ ಶಾಂತಿ ಮಾಡಿಸುವಂತೆ ಮಾಡಿದೆಯಂತೆ.
ಕುಕ್ಕೆಸುಬ್ರಮಣ್ಯದಲ್ಲೆಲ್ಲ ಅತಿ ಹೆಚ್ಚು ಪ್ರಾಯಶ್ಚಿತ್ತ , ದೋಷಪರಿಹಾರ ಎಲ್ಲಾ ಮಾಡುವುದು ಪೇಟೆಯವರೇ.

ಅದಿರಲಿ.
ಈಗೊಂದು ತರ್ಕ ಜಿಜ್ಞಾಸೆಯುಂಟು ನಿಮ್ಮೊಡನೆ ಹಂಚಿಕೊಳ್ಳಲಿಕ್ಕೆ.ಸಿಲ್ಲಿಯಾದ್ರೂ ಗಂಭೀರವಾದದ್ದೆ!!
ನಮ್ಮ ಆವರಣದೊಳಗೆಯೇ ಮನೆಯ ಹಿಂದೆ ಸುಮಾರು ಏಳೆಂಟು ಅಡಿಗಳ ದೂರದಲ್ಲಿ ಕಳೆದ ಆರು ವರ್ಷಗಳಿಂದ ಒತ್ತರೆಯೇ ಮಾಡದ (ನಾವು ಇದನ್ನು ಖರೀದಿಸಿದ ನಂತರ) , ಪೊದರು ಮರ ಬಳ್ಳಿಗಳಿಂದ ಕೂಡಿದ ,ಸುಮಾರು ೩೫ ಗುಣಿಸು ೯೦ ಅಡಿ ವಿಸ್ತೀರ್ಣದ ಜಾಗ ಇದೆ. ಮುಳ್ಳಂದಿ ಮಾಟೆ , ದೊಡ್ಡ ಪುಂಚಗಳೆಲ್ಲ ಇರುವುದು ಇಲ್ಲಿಯೇ.

ಈಗ ಪ್ರಶ್ನೆ ಏನಪ್ಪಾ ಅಂದ್ರೆ ,

ಹೀಗೆ ಮನೆ ಹತ್ರ ಬಲ್ಲೆ ಇತ್ಯಾದಿ ಇರುವುದರಿಂದ ಹಾವುಗಳಿಗೆ ಅಲ್ಲಿಯೇ ಆಶ್ರಯ ಸಿಗುವುದರಿಂದ ಅವುಗಳು ಅಂಗಳಕ್ಕೆ ಅಥವಾ ಮನೆಯೊಳಗೆ ಬರುವ ಸಂಭವ ಕಡಿಮೆಯೋ?
ಅಥವಾ
ಹೀಗೆ ಮನೆ ಹತ್ರ ಬಲ್ಲೆ ,ಪೊದರುಗಳನ್ನು ಬೆಳೆಸುವುದರಿಂದ ಹೊರಗಿಂದಲೂ ದೂರದಿಂದಲೂ ಹಾವುಗಳು ಅದರತ್ತ ಆಕರ್ಷಿತವಾಗಿ ಮನೆ ಆವರಣಕ್ಕೆ ಬರುವ ಸಂಭವ ಜಾಸ್ತಿಯೋ?
ಉತ್ತರ ಗೊತ್ತಿದ್ದರೆ ಹೇಳಿ.


ಕೊನೆ ಬೆಡಿ :

ಮದುವೆಯಾಗಲು ತುಂಬಾ ಸಮಯ ಹುಡುಗಿ ಸಿಗದೆ ಕೊನೆಗೆ ಹುಡುಗಿ ಸಿಕ್ಕಿದಾಗ ತಾನು ಹರಕೆ ಹೇಳಿದ್ದಂತೆಯೇ ಮದುವೆ ದಿನವೇ ಮಾಲೆ(ಅಯ್ಯಪ್ಪನದ್ದು!!? ) ಹಾಕಿದನಂತೆ

1 ಕಾಮೆಂಟ್‌:

  1. ಗಿರೀಶ್ ಭಟ್ರೇ...ನಿಮ್ಮ ಸಾವಯವ ಪ್ರೀತಿಗೆ ಅಭಿನಂದನೆಗಳು..ಎಲ್ಲಾ ಈಗ ಸಾವಯವ, ನೈಸರ್ಗಿಕ ಮೂಲಗಳತ್ತ ಹೊರಳುತ್ತಿವೆ..ಆದರೆ ನಿಸರ್ಗವನ್ನ ಕಾಪಾಡುವ ಕ್ರಮಗಳು ಜರುಗುತ್ತಿಲ್ಲ..ಇದು ನಿಮ್ಮಿಂದಾದರೂ ಆಗುತ್ತಿದೆಯಲ್ಲಾ ಸಮಾಧಾನ..

    ಪ್ರತ್ಯುತ್ತರಅಳಿಸಿ